ಫಾರ್ಮಾಲ್ಡಿಹೈಡ್
HCHO. ಇದನ್ನು ಮಿಥೆನಾಲ್ ಎಂದೂ ಅನ್ನುವರು. ಇದು ಆ್ಯಲಿಫ್ಯಾಟಿಕ್ ಆಲ್ಡಿಹೈಡ್ ಎಂಬ ಸಾವಯವ ಸಂಯುಕ್ತಗಳ ಕುಟುಂಬದ ಮೊದಲ ಸದಸ್ಯ. 1859ರಲ್ಲಿ ಬಟ್ಲರೋವ್ ಎಂಬಾತ ಅವಿಷ್ಕರಿಸಿದ. ಇದು ಒಂದು ಅನಿಲ. ಇದನ್ನು ನೀರಿನಲ್ಲಿ ವಿಲೀನಗೊಳಿಸಿದಾಗ ದೊರೆಯುವ 37% ದ್ರಾವಣವನ್ನು ಮಾತ್ರ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಈ ದ್ರಾವಣವನ್ನು ಹಾಗೆಯೇ  ಕೆಲದಿನ ಸಂಗ್ರಹಿಸಿ ಇಟ್ಟೆರೆ ಅಥವಾ ಸಂಘನಿಸಿದರೆ ಅದರಲ್ಲಿಯ ಫಾರ್ಮಾಲ್ಡಿಹೈಡ್ ಪಾಲಿಮರೀಕರಣ ಹೊಂದಿ ಬಿಳಿ ಬಣ್ಣದ ಹುಡಿಯಾಗುತ್ತದೆ. ಇದಕ್ಕೆ ಪ್ಯಾರಾಫಾರ್ಮಾಲ್ಡಿಹೈಡ್ ಎಂದು ಹೆಸರು. ಇದನ್ನು ಕಾಸಿ ಫಾರ್ಮಾಲ್ಡಿಹೈಡ್ ಅನಿಲವನ್ನು ಮತ್ತೆ ದೊರೆಕಿಸಬಹುದು. ಅನಿಲವನ್ನು ಯುಕ್ತ ವಿಧಾನದಲ್ಲಿ ತಣಿಸಿದಾಗ ಸ್ಫಟಿಕಾಕೃತಿಯ ಬಿಳಿ ಘನ ವಸ್ತು ದೊರೆಯುವುದು. ಇದರಲ್ಲಿ ಮೂರು ಫಾರ್ಮಾಲ್ಡಿಹೈಡ್ ಅಣುಗಳು ಸಂಯೋಜಿತವಾಗಿರುವುದರಿಂದ ಇದಕ್ಕೆ ಟ್ರೈಆಕ್ಸೇನ್ ಎಂಬ ಹೆಸರುಂಟು. ಫಾರ್ಮಾಲ್ಡಿಹೈಡ್‍ನ್ನು ಶುದ್ಧರೂಪದಲ್ಲಿ ಹಾಗೂ ಕಡಿಮೆ ಬೆಲೆಯಲ್ಲಿ ಉತ್ಪಾದಿಸಲು ಸಾಧ್ಯವಿರುವುದರಿಂದ ಮತ್ತು ಫಾರ್ಮಾಲ್ಡಿಹೈಡ್ ಅನೇಕ ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸುವ ಶಕ್ತಿ ಹೊಂದಿರುವುದರಿಂದ ಇದನ್ನು ಪ್ರಪಂಚದ ಅತ್ಯಂತ ಮಹತ್ತ್ವದ ಔದ್ಯೋಗಿಕ ಹಾಗೂ ಸಂಶೋಧನಾ ರಾಸಾಯನಿಕಗಳ ಪೈಕಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದರ ವಾರ್ಷಿಕ ಉತ್ಪಾದನೆ ಈಗ 12(106 ಮೆಟ್ರಿಕ್ ಟನ್ನಿಗಿಂತಲೂ ಹೆಚ್ಚು.

	ಮೀಥೈಲ್ ಮದ್ಯದ ಬಾಷ್ಟವನ್ನು ಕ್ರಿಯಾವರ್ಧಕದ ಇರವಿನಲ್ಲಿ ಉತ್ಕರ್ಷಿಸಿ ಫಾರ್ಮಾಲ್ಡಿಹೈಡ್‍ನ್ನು ತಯಾರಿಸುತ್ತಾರೆ. ಇದೂ ಅಲ್ಲದೆ ನೈಸರ್ಗಿಕ ಅನಿಲ, ಡೈಈಥೈಲ್ ಈಥರುಗಳನ್ನು ಉತ್ಕರ್ಷಣೆ ಮಾಡುವುದರಿಂದಲೂ ಫಾರ್ಮಾಲ್ಡಿಹೈಡ್‍ನ್ನು ಉತ್ಪಾದಿಸುತ್ತಾರೆ. ಆದರೆ ಪ್ರಪಂಚದ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ಫಾರ್ಮಾಲ್ಡಿಹೈಡ್‍ನ್ನು ಉತ್ಪಾದಿಸುವುದು ಮಾತ್ರ ಮೀಥೈಲ್  ಮದ್ಯದಿಂದ. ಬೆಳ್ಳಿ ಅಥವಾ ತಾಮ್ರವನ್ನಾಗಲೀ ವೆನೇಡಿಯಮ್ ಮೊಲಿಬ್ಡಿನಮ್, ಕಬ್ಬಿಣ ಇವುಗಳ ಆಕ್ಸೈಡುಗಳನ್ನಾಗಲೀ ಕ್ರಿಯಾವರ್ಧಕಗಳಾಗಿ ಬಳಸಿ ಮೀಥೈಲ್ ಮದ್ಯವನ್ನು  ಉತ್ಕರ್ಷಿಸುವುದರಿಂದ ಫಾರ್ಮಾಲ್ಡಿ ಹೈಡ್ ದೊರೆಯುತ್ತದೆ. ಮೊದಲು ಮೀಥೈಲ್ ಮದ್ಯದ ಬಾಷ್ಟವನ್ನು ಸಾಕಷ್ಟು ವಾಯುವಿನೊಂದಿಗೆ ಬೆರೆಸಿ ಮಿಶ್ರಣವನ್ನು 4000-7500ಅ ವರೆಗೆ ಕಾಸಿದ ಬೆಳ್ಳಿಯ ಜಾಲರಿಯ ಮೇಲೆ ಹಾಯಿಸಿದಾಗ ಮೀಥೈಲ್‍ಮದ್ಯ ಉತ್ಕರ್ಷಣೆಗೊಂಡು ಫಾರ್ಮಾಲ್ಡಿಹೈಡ್ ಆಗುತ್ತದೆ. ಇದು ಉತ್ಕರ್ಷಣೆ ಹೊಂದದೇ ಇದ್ದ ಮೀಥೈಲ್ ಮದ್ಯವನ್ನು ಆಂಶಿಕ ಬಟ್ಟೀಕರಣದಿಂದ ಬೇರ್ಪಡಿಸಿ ಫಾರ್ಮಾಲ್ಡಿಹೈಡ್‍ನ್ನು  ನೀರಿನಲ್ಲಿ ವಿಲೀನಗೊಳಿಸಿ ಮೀಥೈಲ್ ಸಂಗ್ರಹಿಸಲಾಗುತ್ತದೆ. ಆಕ್ಸೈಡ್ ಕ್ರಿಯಾವರ್ಧಕಗಳನ್ನು ಉಪಯೋಗಿಸಿ ಮೀಥೈಲ್ ಮದ್ಯರಹಿತ ಫಾರ್ಮಾಲ್ಡಿಹೈಡ್‍ನ್ನು ಉತ್ಪಾದಿಸಬಹುದು.

	ಫಾರ್ಮಾಲ್ಡಿಹೈಡ್ ವರ್ಣರಹಿತ ಅನಿಲ. ತೀವ್ರಘಾಟುವಾಸನೆಯುಳ್ಳದ್ದು. ಇದರ ಘನೀಭವನ ಬಿಂದು -920ಅ, ಕುದಿಬಿಂದು-21.2( ಅ.  ತೀವ್ರ ರಾಸಾಯನಿಕ ಚಟುವಟಿಕೆಯುಳ್ಳದ್ದು, ಆಲ್ಡಿಹೈಡುಗಳು ಹೊಂದುವ ಎಲ್ಲ ಕ್ರಿಯೆಗಳನ್ನೂ ಇದು ಹೊಂದುತ್ತದೆ. ಫಾರ್ಮಾಲ್ಡಿಹೈಡ್ ಅಮೊನಿಯಾದೊಂದಿಗೆ ವರ್ತಿಸಿದಾಗ ಹೆಕ್ಸಾಮಿಥಿಲೀಸ್‍ಟೆಟ್ರಾಮೈನ್ ಎಂಬ ಸಂಯುಕ್ತವನ್ನು ಕೊಡುತ್ತದೆ. ಇದನ್ನು ನೈಟ್ರೀಕರಿಸಿ ಸೈಕ್ಲೊನೈಟ್ ಎಂಬ ಸ್ಫೋಟಕದ್ರವ್ಯವನ್ನು ತಯಾರಿಸುತ್ತಾರೆ. ಅದರಂತೆ ಪೆಂಟಾ ಇರಿಥ್ರಿಟಾಲ್ ಟೆಟ್ರನೈಟ್ರೇಟ್  ಎಂಬ ಮತ್ತೊಂದು ಸ್ಫೋಟಕದ್ರವ್ಯವನ್ನು  ತಯಾರಿಸುವಲ್ಲಿಯೂ ಫಾರ್ಮಾಲ್ಡಿಹೈಡನ್ನು ಬಳಿಸುತ್ತಾರೆ. ಪ್ರಪಂಚದ ಒಟ್ಟು ಉತ್ಪಾದನೆಯ ಶೇಕಡಾ 75 ಭಾಗವನ್ನು ಫಾರ್ಮಾಲ್ಡಿಹೈಡ್‍ರೆಸಿನ್ ತಯಾರಿಸಲು ಬಳಸಲಾಗುತ್ತದೆ. ಮುಖ್ಯವಾದ ರೆಸಿನ್ನುಗಳೆಂದರೆ ಫೀನಾಲ್-ರೆಸಿನ್ ಮತ್ತು ಮೆಲಮೈನ್-ಫಾರ್ಮಾಲ್ಡಿಹೈಡ್ ರೆಸಿನ್ ಉಳಿದ ಫಾರ್ಮಾಲ್ಡಿಹೈಡ್‍ನ್ನು ಜವಳಿ ಉದ್ದಿಮೆ, ಔಷಧ ತಯಾರಿಕೆ, ಬಣ್ಣ, ಕಾಗದ ಚರ್ಮ, ಗೊಬ್ಬರ ಮುಂತಾದ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ. ಸಸ್ಯವಿಜ್ಞಾನದ ಹಾಗೂ ಪ್ರಾಣಿ ವಿಜ್ಞಾನದ ಮಾದರಿಗಳನ್ನು (ಸ್ಟೆಸಿಮನ್ಸ್) ಸಂರಕ್ಷಿಸುವಲ್ಲಿಯೂ ಇದನ್ನು ಬಳಸುತ್ತಾರೆ. ಇದು ಸೋಂಕುನಿವಾರಕ ಕೂಡ ಹೌದು.

ಭಾರತದಲ್ಲಿ ಫಾರ್ಮಾಲ್ಡಿಹೈಡನ್ನು ಮೊತ್ತಮೊದಲು ಕಿರ್ಲೋಸ್ಕರ ವಾಡಿಯಲ್ಲಿ ಉತ್ಪಾದಿಸಲು ಆರಂಭಿಸಲಾಯಿತು. ನಾಲ್ಕು ವರ್ಷಗಳ ಬಳಿಕ ಈ ಕಾರ್ಖಾನೆಯನ್ನೂ ಮುಚ್ಚಲಾಯಿತು. ಇಲ್ಲಿಯ ಉಪಕರಣಗಳನ್ನು ಭದ್ರಾವತಿ ಮೈಸೂರು ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ ಕೊಂಡುಕೊಂಡಿತು. ಒಂದನೆಯ ಮಹಾಯುದ್ಧದ ಅನಂತರ ಭದ್ರ್ರಾವತಿಯಲ್ಲಿ ಮೀಥೈಲ್ ಮದ್ಯದಿಂದ ಫಾರ್ಮಾಲ್ಡಿಹೈಡನ್ನು ತಯಾರಿಲಾಗುತ್ತಿದೆ. ಸಿಂಧ್ರಿ ಗೊಬ್ಬರ ಕಾರ್ಖಾನೆಯಲ್ಲಿಯೂ ಇದನ್ನು ಉತ್ಪಾದಿಸುವ ಸೂಚನೆ ಉಂಟು. ಭಾರತದಲ್ಲಿ ಈಗ ಪ್ರತಿವರ್ಷ 45,520 ಮೆಟ್ರಿಕ್‍ಟನ್ ಫಾರ್ಮಾಲ್ಡಿಹೈಡ್ ಉತ್ಪಾದಿಸಲಾಗುತ್ತಿದೆ. ಹೆಚ್ಚಿಗೆ ಬೇಕಾಗುವ ಫಾರ್ಮಾಲ್ಡಿಹೈಡನ್ನು ಆಮದು ಮಾಡಿಕೊಳ್ಳಲಾಗುತ್ತದೆ.					(ವೈ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ